 ಫ್ರಾನ್ಸಿಸ್ ವೈಟ್ ಎಲ್ಲಿಸ್: - (1780-1819). 1796 ರಲ್ಲಿ ಕಂದಾಯ ಇಲಾಖೆಯ ಅಧಿಕಾರಿಯಾಗಿ ಭಾರತಕ್ಕೆ ಬಂದು ದಕ್ಷಿಣ ಭಾರತದ ಭಾಷೆ, ಚರಿತ್ರೆ, ಪ್ರಾಚೀನತೆ, ಸಂಸ್ಕೃತಿ ಮುಂತಾದವನ್ನು ಅರಿಯುವುದರಲ್ಲಿ ಉಳಿದ ಜೀವಮಾನವನ್ನೇ ಕಳೆದ ವ್ಯಕ್ತಿ. 20 ವರ್ಷಗಳ ಈ ಅವಧಿಯಲ್ಲಿ ತನ್ನ ಬಿಡುವಿನ ಸಮಯವನ್ನು ಈತ ಸಂಸ್ಕೃತ ಮತ್ತು ದಕ್ಷಿಣ ಭಾರತದ ವಿವಿಧ ಭಾಷೆಗಳ ವೈಚಿತ್ರ್ಯಗಳನ್ನು ವೈಶಿಷ್ಟ್ಯಗಳನ್ನು ಕಲಿತು ಅರ್ಥಮಾಡಿಕೊಳ್ಳುವುದರಲ್ಲಿಯೇ ಕಳೆದ. ಆ ಬಗ್ಗೆ ದೊರೆಯುವ ಎಲ್ಲ ಸಾಮಗ್ರಿಯನ್ನೂ ಸಂಗ್ರಹಿಸಿದ. ಪರಿಶೋಧನೆ, ಪರಿಶೀಲನೆ ಸಮರ್ಪಕವಾದಾಗ ಹೊರತು ಏನನ್ನೂ ಪ್ರಕಟಿಸಬಾರದೆಂದು ತಡೆಹಿಡಿದನಾದರೂ ಆತ ಸಂಗ್ರಹಿಸಿದ ವಿಷಯ ಅಗಾಧ, ಅಮೂಲ್ಯ. ಸಂಗ್ರಹಿಸಿದ್ದ ಮೂಲ ಸಾಮಗ್ರಿಯನ್ನು ಹಾಗೆಯೇ ಕೋಶರೂಪದಲ್ಲಿ ಪ್ರಕಟಿಸಿದ್ದರೂ ಅದು ಆಧುನಿಕ ಭಾಷಾವಿಜ್ಞಾನದಲ್ಲಿ ನಿಗೂಢವಾಗುಳಿದಿರುವ ಎಷ್ಟೋ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಿತ್ತು. ತನ್ನ ಸಂಶೋಧನಾ ವಿಷಯದ ಬಗ್ಗೆ ಇನ್ನೂ ಹೆಚ್ಚಿನ ವಿವರಗಳನ್ನು ತಿಳಿಯಬೇಕೆಂದು, ದಕ್ಷಿಣ ಭಾರತದ ಅಥೆನ್ಸ್‌ ಎಂದು ಪ್ರಖ್ಯಾತವಾಗಿರುವ ಮಧುರೆಗೆ ಬಂದು ಆ ಜಿಲ್ಲೆಯಲ್ಲಿ ಆಗ ಕಲೆಕ್ಟರ್ ಆಗಿದ್ದ ರೌಸ್ ಪೀಟರನ ಜೊತೆಯಲ್ಲಿ ತಂಗಿದ್ದವನು ಒಂದು ದಿನ ಅದೇ ಪ್ರಾಂತ್ಯದಲ್ಲಿರುವ ರಾಮನಾಡಿಗೆ ಸಂತೋಷ ಪ್ರವಾಸಕ್ಕೆ ಹೋಗಿದ್ದಾಗ ಅಕಸ್ಮಾತ್ತಾಗಿ ವಿಷವನ್ನು ಸೇವಿಸಿ ಮಾರ್ಚ್ 10 ರಂದು ಅಸುನೀಗಿದ. ಹೀಗೆ ಎಲ್ಲಿಸ್ ಅಕಾಲಮೃತ್ಯುವಿಗೆ ಈಡಾದದ್ದು ದ್ರಾವಿಡ ಭಾಷೆ ಮತ್ತು ಸಾಹಿತ್ಯಕ್ಕೆ ತುಂಬಲಾಗದ ಹಾನಿ. ಅಡಕ್ಕಿ ಸುಬ್ಬರಾವು ಎಂಬ ವಿದ್ವಾಂಸ ತಾನು ಬರೆದ ಸೆಲೆಕ್ಷನ್ ಆಫ್ ಸ್ಟೋರೀಸ್ ಅಂಡ್ ರೆವೆನ್ಯೂ ಪೇಪರ್ಸ್ ಇನ್ ದಿ ಕರ್ಣಾಟಕ ಲ್ಯಾಂಗ್ವೇಜ್ ಎಂಬ ಪುಸ್ತಕವನ್ನು ಎಲ್ಲಿಸ್ನ ಜ್ಞಾಪಕಾರ್ಥಕವಾಗಿ ಅವನಿಗೆ ಅರ್ಪಿಸಿದ್ದಾನೆ. ಆತ ಸತ್ತಾಗ ಆತನಲ್ಲಿದ್ದ ಚರ ಆಸ್ತಿಯನ್ನೆಲ್ಲ ಮಧುರೆ ಮತ್ತು ಚೆನ್ನೈಗಳಲ್ಲಿ ಹರಾಜಿನ ಮೂಲಕ ಮಾರಲಾಯಿತು. ಹೀಗಾಗುವಾಗ ಆತ ಬರೆದಿಟ್ಟಿದ್ದ ಅನೇಕ ಲೇಖನಗಳು ಕಳೆದುಹೋದವು, ಇಲ್ಲವೆ ನಾಶವಾದವು. (ತಿಂಗಳುಗಟ್ಟಲೆ ಪೀಟರನ ಮನೆಯಲ್ಲಿ ಒಲೆ ಹಚ್ಚಲಿಕ್ಕೆ ಅವನ್ನು ಬಳಸಲಾಯಿತೆಂದು ಇತ್ತೀಚೆಗೆ ತಿಳಿದುಬಂದಿದೆ).

ಅತ್ಯಂತ ಸಮರ್ಥ; ದಕ್ಷಿಣ ಭಾರತದ ಅಧ್ಯಯನ ಅದರ ಚರಿತ್ರೆ ಮತ್ತು ಭಾಷೆಗಳ ವಿಷಯದಲ್ಲಿ ಬಳಲದೆ, ಬೇಸರಪಡದೆ, ಸತತವಾಗಿ ಸಂಶೋಧನೆಯನ್ನು ನಡೆಸಿದವ; ಪ್ರಾಚೀನ-ಅರ್ವಾಚೀನ, ದೇಶೀಯ-ಐರೋಪ್ಯ ವಿಷಯಗಳ ಬಗ್ಗೆ ವಿಸ್ತೃತವಾದ ಜ್ಞಾನವನ್ನು ಪಡೆದವ; ನಿಖರವಾದ ನ್ಯಾಯತೀರ್ಮಾನ ಮತ್ತು ಉತ್ತಮ ಅಭಿರುಚಿಯ ಸಂಕೇತದಂತಿದ್ದವ-ಎಂದು ಮದ್ರಾಸ್ ಲಿಟರರಿ ಸೊಸೈಟಿ ಪತ್ರಿಕೆ ಅವನನ್ನು ಕೊಂಡಾಡಿದೆ.

ಬಂಗಾಲದ ಮುಖ್ಯ ನ್ಯಾಯಾಧೀಶನಾಗಿದ್ದ ಸರ್ ಚಾರಲ್ಸ್‌ಗ್ರೆ ಹಿಂದೂ ನ್ಯಾಯದ ಬಗ್ಗೆ ಲಿಟರರಿ ಸೊಸೈಟಿ ಸಭೆಯಲ್ಲಿ ಓದಿದ ಲೇಖನಗಳು 500 ಪುಟಗಳಷ್ಟಾಗುತ್ತವೆ. ಆದರೆ ಅದೆಲ್ಲವೂ ಕೊನೆಯವರೆಗೂ ಕರಡುಪ್ರತಿಯಾಗಿಯೇ ಉಳಿಯಿತು.

ಮಲಬಾರ್ ಮತ್ತು ಕೆನರ ಜಿಲ್ಲೆಗಳಲ್ಲಿ ಮಿರಾಸಿ ಹಕ್ಕಿನ ಬಗ್ಗೆ ತಲೆ ದೋರಿದ್ದ ವಿವಾದಕ್ಕೆ ಸಂಬಂಧಿಸಿದಂತೆ 1812ರಲ್ಲಿ ಮದ್ರಾಸು ಸರ್ಕಾರ ಆಯಾ ಜಿಲ್ಲೆಗಳಲ್ಲಿದ್ದ ಅಧಿಕಾರಿಗಳಿಗೆ ಅಲ್ಲಿನ ಮಿರಾಸಿ ಪದ್ಧತಿಯ ಬಗ್ಗೆ ವರದಿ ಮಾಡಬೇಕೆಂದು ಪ್ರಶ್ನಮಾಲಿಕೆಯೊಂದನ್ನು ಕಳುಹಿಸಿಕೊಟ್ಟಾಗ ಎಲ್ಲಿಸ್ ಕೇವಲ ಪ್ರೆಸಿಡೆನ್ಸಿಯ ಕಲೆಕ್ಟರಾಗಿದ್ದು ತನಗೆ ನೇರ ಸಂಬಂಧಪಡದಿದ್ದರೂ ಸಿದ್ದಪಡಿಸಿ ಕೊಟ್ಟಿರುವ ಉತ್ತರಗಳನ್ನು ಕಂಡು ಸರ್ಕಾರ ಕೂಡಲೇ ಆ ಉತ್ತರಗಳನ್ನೆಲ್ಲ ಅಚ್ಚು ಮಾಡುವಂತೆ ಆಜ್ಞೆ ನೀಡಿತು. ಮಿರಾಸಿ ಹಕ್ಕಿಗೆ ಸಂಬಂಧಿಸಿದಂತೆ ಸುಮಾರು ಹದಿನೇಳು ಪ್ರಶ್ನೆಗಳಿಗೆ ಆತ ಉತ್ತರ ಕೊಟ್ಟಿದ್ದಾನೆ. ಕೊಟ್ಟ ಉತ್ತರಗಳು ಪುರ್ಣವಾಗಿವೆ. ನಿರ್ದುಷ್ಟವಾಗಿವೆ. ದೃಷ್ಟಾಂತಗಳು ನಾಡಿನ ಸಾಹಿತ್ಯ ಮತ್ತು ಇತಿಹಾಸಗಳಿಂದ ಆಯ್ಕೆಯಾಗಿವೆ. ಈ ಪುಸ್ತಕ ಇಂದಿಗೂ ಪ್ರಮಾಣಗ್ರಂಥವೆಂದು ಪರಿಗಣಿಸಲ್ಪಟ್ಟಿದೆ.

ತಮಿಳಿನಲ್ಲಿ ನೈತಿಕಗ್ರಂಥವೆಂದು ಪ್ರಸಿದ್ಧವಾಗಿರುವ ಕುರಳ್ ಗ್ರಂಥದ ಅರ್ಥ ವಿವರಣೆ ಎಲ್ಲಿಸ್ನ ಇನ್ನೊಂದು ಶ್ರೇಷ್ಠವಾದ ಕೆಲಸ. ಅವನು ಕುಳ್ ಗ್ರಂಥದ ಮೊದಲ ಭಾಗದ ದ್ವಿಪದಿಗಳನ್ನು ಸರಳರಗಳೆಯ ಛಂದಸ್ಸಿನಲ್ಲಿ ಅನುವಾದ ಮಾಡಿರುವುದಲ್ಲದೆ, ವಿಮರ್ಶಾತ್ಮಕವಾದ ವಿವರಣೆಯನ್ನೂ ನೀಡಿದ್ದಾನೆ. ಹೀಗೆ ಮಾಡುವಾಗ ತನ್ನ ವಿವರಣೆಗಾಗಿ ಶ್ರೇಷ್ಠರೆನಿಸಿದ ದೇಶೀಯ ವಿದ್ವಾಂಸರ ಪುಸ್ತಕಗಳಿಂದ ಅನೇಕ ದೃಷ್ಟಾಂತಗಳನ್ನು ಕೊಟ್ಟಿದ್ದಾನೆ. ಇದರಿಂದಾಗಿ ಅದರಲ್ಲಿ ಅಮೂಲ್ಯವಾದ ವಿವರಣೆಗಳು, ದಂತಕಥೆಗಳು, ಆಗಿನ ತಾತ್ತ್ವಿಕ ಪದ್ಧತಿಗಳು, ಜನತೆಯ ವಿವಿಧ ರೀತಿ-ನೀತಿಗಳು ವೇದ್ಯವಾಗುತ್ತವೆ. ಆತ ಮದ್ರಾಸನ್ನು ಬಿಡುವ ವೇಳೆಗೆ ಕುರಳ್ ಗ್ರಂಥದ ಮೊದಲ ಭಾಗದ ಹದಿನೆಂಟು ಅಧ್ಯಾಯಗಳಿಗೆ ಸರಳಾನುವಾದ, ಟೀಕೆ-ಟಿಪ್ಪಣಿಗಳನ್ನು ಬರೆದಿದ್ದ. ಅದರಲ್ಲಿ ಸುಮಾರು 304 ಪುಟಗಳನ್ನೊಳಗೊಂಡ ಹದಿಮೂರು ಅಧ್ಯಾಯಗಳು ಮಾತ್ರ ಯಾವ ತಾರೀಖು ಅಥವಾ ಶಿರೋನಾಮೆಯೂ ಇಲ್ಲದೆ ಅಚ್ಚಾಗಿವೆ.

ಫ್ರಾನ್ಸಿಸ್ ವೈಟ್ ಎಲ್ಲಿಸ್ ಇನ್ನೂ ಕೆಲವು ಸಣ್ಣ ಪುಟ್ಟ ಲೇಖನಗಳನ್ನು ಬಿಟ್ಟು ಹೋಗಿದ್ದಾನೆ. ಪೋರ್ಟ್ ಸೇಂಟ್ ಜಾರ್ಜ್ ಕಾಲೇಜಿನ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ತಮಿಳು, ತೆಲುಗು, ಮಲೆಯಾಳಂ ಮತ್ತು ಪ್ರಾಯಶಃ ಕನ್ನಡ ಭಾಷೆಗಳ ಮೇಲೆ ಲೇಖನಗಳನ್ನು ಬರೆದಿದ್ದಾನೆ. ಇವುಗಳಲ್ಲಿ ಮಲೆಯಾಳಂ ಭಾಷೆಯ ಬಗ್ಗೆ ಬರೆದ ಲೇಖನದ ಕೆಲವು ಪ್ರತಿಗಳು ಸಿಕ್ಕುತ್ತವೆ. ಡೇಸರ್ಟೇಷನ್ ಆನ್ ಮಲಯಾಳಂ ಲ್ಯಾಂಗ್ವೇಜ್ ಎಂಬುದು ಇಂಡಿಯನ್ ಆಂಟಿಕ್ಟೆರಿಯಲ್ಲಿ ಅಚ್ಚಾಗಿದೆ. ತೆಲುಗಿನ ಬಗ್ಗೆ ಈತ ಬರೆದ ಒಂದು ಲೇಖನವನ್ನು ಎ. ಡಿ. ಕ್ಯಾಂಪ್ಬೆಲ್ ತನ್ನ ತೆಲುಗು ವ್ಯಾಕರಣದ (1816) ಮುನ್ನುಡಿಯಾಗಿ ಸೇರಿಸಿಕೊಂಡು ಅಚ್ಚುಹಾಕಿಸಿದ್ದಾನೆ. ಆ ಕಾಲೇಜಿನ ಅನುಪಯುಕ್ತ ಕಾಗದಗಳ ರಾಶಿಯ ಮಧ್ಯೆ ದೊರೆತ ಕೊಚ್ಚಿನ್ನಿನ ಜ್ಯೂಯಿಷ್ ಕಾಪರ್ ಪ್ಲೇಟಿನ ಅನುವಾದ ಮದ್ರಾಸ್ ಲಿಟರರಿ ಜರ್ನಲ್ಲಿನಲ್ಲಿ ಅಚ್ಚಾಗಿದೆ.

ಅದೇ ಕಾಗದದ ರಾಶಿಯ ಮಧ್ಯದಲ್ಲಿ ದಕ್ಷಿಣಭಾರತದ ಕವಿಗಳ ಗ್ರಂಥಗಳಿಂದ ಆಯ್ದ ಲಕ್ಷ್ಯ ಪದ್ಯಗಳನ್ನು ಒಳಗೊಂಡಿದ್ದು ತಮಿಳು ಛಂದಸ್ಸಿಗೆ ಸಂಬಂಧಪಟ್ಟ ಎರಡು ಗ್ರಂಥಗಳ ಕರಡು ಪ್ರತಿಗಳು ವಾಲ್ಟರ್ ಎಲಿಯಟ್ಟನಿಗೆ ದೊರೆತಿವೆ. ರೆವರೆಂಡ್ ಟಿ. ಬ್ರದರ್ಟನ್ನಂಥ ವಿದ್ವಾಂಸರು ಈ ಗ್ರಂಥಪ್ರತಿಗಳನ್ನು ನೋಡಿ ಶ್ಲಾಘಿಸಿದ್ದಾರೆ. ಸುಮಾರು ನೂರು ಪುಟಗಳನ್ನೊಳಗೊಂಡ ಈ ಕರಡು ಪ್ರತಿಗಳು ಸಹಜವಾಗಿಯೇ ಅಪುರ್ಣವಾಗಿವೆ. ಮಾಡರ್ನ್ ಇಮಿಟೇಷನ್ ಆಫ್ ವೇದಾಸ್ ಎಂಬ ಎಲ್ಲಿಸನ ಇನ್ನೊಂದು ಲೇಖನ ಏಷ್ಯಾಟಿಕ್ ರಿಸರ್ಚಸ್ನಲ್ಲಿ ಪ್ರಕಟವಾಗಿದೆ.
ಒಟ್ಟಿನಲ್ಲಿ ತಾನು ಕೈಕೊಂಡ ಕಾರ್ಯಕ್ಷೇತ್ರದಲ್ಲಿ, ಸರ್ಕಾರಿ ಕೆಲಸದ ಜೊತೆಗೆ, ಇಷ್ಟು ನಿಷ್ಠೆ, ಶ್ರದ್ಧೆ, ತಲ್ಲೀನತೆಯಿಂದ ದುಡಿದು ತನ್ನ ಬಹುಮುಖ ಪ್ರತಿಭೆಯನ್ನು ಮೆರೆದ ಎಲ್ಲಿಸ್ ಪ್ರಪ್ರಥಮವಾಗಿ ದ್ರಾವಿಡಭಾಷೆಗಳು ಸಂಸ್ಕೃತಜನ್ಯವಲ್ಲವೆಂದೂ ಸ್ವತಂತ್ರವರ್ಗಕ್ಕೆ ಸೇರಿದ ಭಾಷೆಗಳೆಂದೂ ಸಾರಿ ಅವುಗಳ ಸ್ವತಂತ್ರ ಅಸ್ತಿತ್ವವನ್ನು ರೂಪಿಸಿ ದ್ರಾವಿಡ ಭಾಷಾವಿಜ್ಞಾನದ ಆದ್ಯಪ್ರವರ್ತಕನೆನಿಸಿದ್ದಾನೆ.                    (ಬಿ.ಎನ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ